ನರೇಂದ್ರ ದೇವ
1889-1956. ಆಚಾರ್ಯರೆಂದು ಪ್ರಸಿದ್ಧರಾಗಿರುವ ನರೇಂದ್ರ ದೇವರು ಭಾರತದ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಸಮಾಜವಾದಿ ನಾಯಕ, ಶಿಕ್ಷಣತಜ್ಞ, ವಿದ್ವಾಂಸ. 1889ರ ಅಕ್ಟೋಬರ್ 31 ರಂದು ಉತ್ತರ ಪ್ರದೇಶದ ಸೀತಾಪುರದಲ್ಲಿ ಜನಿಸಿದರು. ಬಲದೇವ ಪ್ರಸಾದ್ ಮತ್ತು ಜವಾಹರದೇವಿಯರ ನಾಲ್ಕು ಗಂಡು ಮಕ್ಕಳ ಪೈಕಿ ಇವರು ಎರಡನೆಯವರು. ಪಂಜಾಬಿನ ಸೈಯಾಲ್‍ಕೋಟ್‍ನಿಂದ ಬಂದು ಫೈಜಾóಬಾದ್‍ನಲ್ಲಿ ನೆಲಸಿದ ಮಧ್ಯಮ ವರ್ಗದ ಹಿಂದೂ ಖತ್ರಿ ಕುಟುಂಬ ಇವರದು. ತಂದೆ ಸೀತಾಪುರದಲ್ಲಿ ವಕೀಲರಾಗಿದ್ದರು. ಬಲದೇವ ಪ್ರಸಾದರ ತಂದೆ ಫೈಜಾóಬಾದಿನಲ್ಲಿ ವ್ಯಾಪಾರ ನಿರತರಾಗಿದ್ದರು. ಅವರು ತೀರಿಕೊಂಡಾಗ ಬಲದೇವ ಪ್ರಸಾದರು ತಮ್ಮ ಸಂಸಾರದೊಂದಿಗೆ ಫೈಜಾóಬಾದಿಗೆ ಹೋಗಿ ಅಲ್ಲಿ ನೆಲಸಿದರು. ಚಿಕ್ಕಂದಿನಲ್ಲೇ ಸಂಸ್ಕøತವನ್ನು ಕಲಿತ ನರೇಂದ್ರ ದೇವರು ಸ್ವಾಮಿ ರಾಮತೀರ್ಥ, ಪಂಡಿತ ಮದನ ಮೋಹನ ಮಾಳವೀಯ ಮುಂತಾದವರಿಂದ ಪ್ರಭಾವಿತರಾದರು. ಉದ್ದಕ್ಕೂ ಉತ್ತಮ ವಿದ್ಯಾರ್ಥಿಯಾಗಿದ್ದ ಇವರು ಅಲಹಾಬಾದ್ ಮತ್ತು ಬನಾರಸ್‍ಗಳಲ್ಲಿ ಉನ್ನತ ಶಿಕ್ಷಣ ಪಡೆದು ಎಂ.ಎ. ಪಡೆದರು. ಸಂಸ್ಕøತ, ಶಾಸನಶಾಸ್ತ್ರ, ಪ್ರಾಚೀನ ಲಿಪಿಶಾಸ್ತ್ರ, ಪಾಲಿ, ಪ್ರಾಕೃತ, ಜರ್ಮನ್, ಫ್ರೆಂಚ್ ಇವು ಇವರ ಅಧ್ಯಯನ ವಿಷಯಗಳು. ಎಂ.ಎ. ಗಳಿಸಿದ ಮೇಲೆ ನ್ಯಾಯಶಾಸ್ತ್ರ ಪದವಿಗಾಗಿ ಅಲಹಾಬಾದಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಇವರು ಬಾಲ ಗಂಗಾಧರ ತಿಲಕ, ಲಜಪತ್ ರಾಯ್, ಬಿಪಿನ್ ಚಂದ್ರಪಾಲ್, ಅರವಿಂದ ಘೋಷ್ ಮುಂತಾದವರ ವಿಚಾರಗಳಿಗೆ ಮಾರುಹೋದರು. ವಂದೇ ಮಾತರಂ, ಆರ್ಯ ಮುಂತಾದ ಪತ್ರಿಕೆಗಳನ್ನು ಓದುತ್ತಿದ್ದರಲ್ಲದೆ ಇತಿಹಾಸ ಮತ್ತು ಪ್ರಚಲಿತ ವಿಚಾರಗಳನ್ನು ಅಧ್ಯಯನ ಮಾಡಿ ಲೇಖನಗಳನ್ನು ಬರೆಯುತ್ತಿದ್ದರು. ಎಲ್.ಎಲ್.ಬಿ. ಪದವಿ ಗಳಿಸಿದ ಮೇಲೆ ಫೈಜಾóಬಾದಿಗೆ ಹಿಂದಿರುಗಿ ವಕೀಲಿ ಆರಂಭಿಸಿದರು. ಮಹಾತ್ಮ ಗಾಂಧಿಯವರು ಆರಂಭಿಸಿದ ಚಳವಳಿಯಲ್ಲಿ ನರೇಂದ್ರರೂ ಪಾಲ್ಗೊಂಡರು. ಬ್ರಿಟಿಷ್ ಶಿಕ್ಷಣ ಸಂಸ್ಥೆಗಳನ್ನು ಬಹಿಷ್ಕರಿಸಬೇಕೆಂಬ ಕರೆ ಬಂದಾಗ ಸ್ಥಾಪಿತವಾದ ಕಾಶಿ ವಿದ್ಯಾಪೀಠದಲ್ಲಿ ನರೇಂದ್ರ ದೇವರು ಭಾರತೀಯ ಇತಿಹಾಸದ ಆಚಾರ್ಯರಾದರು (1921). ಭಗವಾನ್ ದಾಸರು ತೀರಿಕೊಂಡ ಮೇಲೆ (1925) ನರೇಂದ್ರ ದೇವರೇ ಅದರ ಪ್ರಾಚಾರ್ಯರಾದರು. ಆಚಾರ್ಯ ಎಂಬುದು ಅವರ ಹೆಸರಿನ ಭಾಗವಾದ್ದು ಆಗಲೇ.

	ಆಚಾರ್ಯ ನರೇಂದ್ರ ದೇವರು ಕಾಶಿ ವಿದ್ಯಾಪೀಠದಲ್ಲಿದ್ದಾಗ ಮಾಕ್ರ್ಸನ ವೈಜ್ಞಾನಿಕ ಸಮಾಜವಾದವನ್ನು ಆಳವಾಗಿ ಅಭ್ಯಾಸ ಮಾಡಿದರು. ಬೌದ್ಧ ಸಿದ್ಧಾಂತವೂ ಇವರನ್ನು ವಿಶೇಷವಾಗಿ ಆಕರ್ಷಿಸಿತು. ರಾಜಕಾರಣವಂತೂ ಇವರ ಜೀವನದ ಅವಿಭಾಜ್ಯ ಅಂಶವೇ ಆಗಿತ್ತು. ಇವರು ಉತ್ತರ ಪ್ರದೇಶ (ಆಗ ಸಂಯುಕ್ತ ಪ್ರಾಂತ್ಯ) ಕಾಂಗ್ರೆಸ್ ಸಮಿತಿ, ಅಖಿಲ ಭಾರತ ಕಾಂಗ್ರೆಸ್ ಸಮಿತಿ ಇವುಗಳ ಸದಸ್ಯರಾಗಿದ್ದರು. ಇಂಡಿಯಾ ಲೀಗಿನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. 1930ರ ಅಸಹಕಾರ ಚಳವಳಿಯಲ್ಲಿ ಇವರ ದಸ್ತಗಿರಿಯಾಯಿತು. ಮತ್ತೆ 1932ರಲ್ಲಿ ಇವರು ಕಾರಾಗೃಹ ಹೊಕ್ಕರು. ಅಲ್ಲಿಂದ ಬಿಡುಗಡೆಯಾದ ಮೇಲೆ, 1934ರಲ್ಲಿ ಇವರೂ ಇವರಂತೆ ಯೋಚಿಸುವ ಇತರ ಹಲವರೂ ಸೇರಿ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ಪಾಟ್ನಾದಲ್ಲಿ ನಡೆದ ಅದರ ಅಧಿವೇಶನಕ್ಕೆ ನರೇಂದ್ರ ದೇವರು ಅಧ್ಯಕ್ಷರಾಗಿದ್ದರು. ಜಯಪ್ರಕಾಶನಾರಾಯಣರು ಅದರ ಕಾರ್ಯದರ್ಶಿಯಾದರು. 1936ರಲ್ಲಿ ಕಾಂಗ್ರೆಸ್ ಕಾರ್ಯ ಸಮಿತಿಯ ಸದಸ್ಯರಾದ ನರೇಂದ್ರ ದೇವರು ಎರಡು ವರ್ಷ ಅದರಲ್ಲಿದ್ದರು. 1936ರಲ್ಲಿ ಸಂಯುಕ್ತ ಪ್ರಾಂತ್ಯದ ವಿಧಾನಸಭೆಗೆ ಅವರು ಚುನಾಯಿತರಾದರೂ ಮಂತ್ರಿಯಾಗಲು ಒಪ್ಪಲಿಲ್ಲ. 1940ರಲ್ಲಿ ವೈಯಕ್ತಿಕ ಸತ್ಯಾಗ್ರಹ ಮಾಡಿ ಸೆರೆಯಾಗಿ ಬಿಡುಗಡೆ ಹೊಂದಿದ ನರೇಂದ್ರ ದೇವರು ಮತ್ತೆ 1942ರಲ್ಲಿ ದಸ್ತಗಿರಿಯಾಗಿ 1945ರಲ್ಲಿ ಬಂಧನದಿಂದ ಹೊರಬಂದರು.

	1948ರಲ್ಲಿ ಕಾಂಗ್ರೆಸಿನಿಂದ ಪ್ರತ್ಯೇಕವಾಗಬೇಕೆಂದು ಸಮಾಜವಾದಿ ಪಕ್ಷ ತೀರ್ಮಾನ ಮಾಡಿತು. ಕಾಂಗ್ರೆಸ್ ವತಿಯಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಇವರೂ ಇವರ ಜೊತೆಗಾರರೂ ತಮ್ಮ ಸದಸ್ಯತ್ವಗಳಿಗೆ ರಾಜೀನಾಮೆ ನೀಡಿದರು. ಮರುಚುನಾವಣೆಯಲ್ಲಿ ಇವರು ಗೆಲ್ಲಲಿಲ್ಲ. 1947ರಿಂದ 1951ರವರೆಗೆ ಇವರು ಲಖನೌ ವಿಶ್ವವಿದ್ಯಾಲಯಕ್ಕೂ 1951ರಿಂದ 1953ರಲ್ಲಿ ಅನಾರೋಗ್ಯದಿಂದ ರಾಜೀನಾಮೆ ಕೊಡುವವರೆಗೆ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೂ ಕುಲಪತಿಯಾಗಿದ್ದರು. 1952ರಲ್ಲಿ ಸಮಾಜವಾದಿ ಪಕ್ಷವೂ ಆಚಾರ್ಯ ಕೃಪಾಲನಿಯವರ ಕಿಸಾನ್ ಮಜ್ದೂರ್ ಪ್ರಜಾಪಕ್ಷವೂ ಒಂದಾಗಿ ಪ್ರಜಾ ಸಮಾಜವಾದಿ ಪಕ್ಷ ಸ್ಥಾಪಿತವಾಯಿತು. 1952ರಲ್ಲಿ ಮತ್ತೆ 1954ರಲ್ಲಿ ಇವರು ರಾಜ್ಯಸಭೆಗೆ ಆಯ್ಕೆ ಹೊಂದಿದ್ದರು. 1952ರಲ್ಲಿ ಭಾರತದ ನಿಯೋಗವೊಂದರ ಸದಸ್ಯರಾಗಿ ಚೀನಕ್ಕೆ ಭೇಟಿ ನೀಡಿದರು. 

ಇವರ ಸಮಾಜವಾದ ಮೂಲಾಧಾರ ಮಾಕ್ರ್ಸನ ವೈಜ್ಞಾನಿಕ ಸಮಾಜವಾದ ಸಿದ್ಧಾಂತ. ಮಾಕ್ರ್ಸನ ದ್ರವ್ಯ ವಾಸ್ತವತಾ ಸಿದ್ಧಾಂತದಲ್ಲಿ ಆಚಾರ್ಯ ನರೇಂದ್ರರಿಗೆ ನಂಬಿಕೆಯಿತ್ತು. ಇವರು ಬುಕಾರಿನನ (1888-1938) ಹಿಸ್ಟಾರಿಕಲ್ ಮೆಟೀರಿಯಲಿಸಮ್ ಪುಸ್ತಕದಿಂದಲೂ ಪ್ರಭಾವಿತರಾಗಿದ್ದರು. ಮಾಕ್ರ್ಸನ ವರ್ಗಘರ್ಷಣೆಯನ್ನೂ ಅವಶ್ಯವಾದರೆ ಹಿಂಸೆ ಅನಿವಾರ್ಯವೆಂಬುದನ್ನೂ ಆಚಾರ್ಯರು ನಂಬಿದ್ದರು. ಇವರು ಉದಾತ್ತ ಬೌದ್ಧ ಧರ್ಮ ಪಂಡಿತರಾಗಿದ್ದರು. ಕೊನೆಯವರೆಗೂ ನಾಸ್ತಿಕರೂ ಮಾಕ್ರ್ಸ್‍ವಾದಿಯೂ ಆಗಿಯೇ ಉಳಿದರು. ಇವರಂತೆ ಜಯಪ್ರಕಾಶ್ ಮತ್ತು ಲೋಹಿಯ ಅವರೂ ಮಾಕ್ರ್ಸ್‍ವಾದಕ್ಕೆ ಒಲಿದಿದ್ದರಾದರೂ ಅವರು ಕ್ರಮೇಣ ಗಾಂಧಿವಾದದತ್ತ ಸರಿದರು. ಅಹಿಂಸೆ ಮತ್ತು ಸರ್ವೋದಯವೇ ಹಿಂಸಾಮಾರ್ಗ ಮತ್ತು ವರ್ಗಯುದ್ಧ ಸಿದ್ಧಾಂತಗಳಿಗಿಂತ ಹೆಚ್ಚು ಎನಿಸಿತು ಜಯಪ್ರಕಾಶಕರಿಗೆ. ಲೋಹಿಯಾ ಅವರಿಗೂ ಮಾಕ್ರ್ಸ್‍ವಾದ ಅಪೂರ್ಣವಾಗಿ ಕಂಡಿತು. ಆದರೆ ಆಚಾರ್ಯರಿಗೆ ಹೀಗೆನಿಸಲಿಲ್ಲ. ಗಾಂಧೀಜಿಯ ಜೊತೆಯಲ್ಲಿ ನಿರಂತರವಾಗಿ ದುಡಿದರೂ ಇವರ ಮಾಕ್ರ್ಸ್ ನಿಷ್ಠೆ ಕುಗ್ಗಲಿಲ್ಲ. ಆಚಾರ್ಯರಿಗೆ ಮಾಕ್ರ್ಸನ ಸಮಾಜವಾದದಲ್ಲಿ ನಂಬಿಕೆಯಿದ್ದುದ್ದು ಅವರ ಹಿಂಸಾಮಾರ್ಗಕ್ಕಾಗಿ ಅಲ್ಲ; ಅವರ ವೈಜ್ಞಾನಿಕತೆಗಾಗಿ ಮತ್ತು ಅದರ ನೈತಿಕ ಉತ್ತಮತೆಗಾಗಿ. ಸಮಾಜವಾದಿ ಸಂಸ್ಕøತಿಯ ನೈತಿಕತೆಯೇ ಇವರಿಗೆ ಅತ್ಯುತ್ತಮವೆನಿಸಿತ್ತು. ಬಂಡವಾಳ ವ್ಯವಸ್ಥೆಯ ಅಂತ್ಯ ಇವರ ದೃಷ್ಟಿಯಲ್ಲೂ ಅನಿವಾರ್ಯ. ಆದರೆ ಸ್ವರಾಜ್ಯ ಸ್ಥಾಪನೆಯಾಗುವವರೆಗೂ ಸಮಾಜವಾದೀ ಕ್ರಾಂತಿ ಅಸಾಧ್ಯವೆಂದು ಇವರು ಭಾವಿಸಿದ್ದರು. ಆದ್ದರಿಂದ ಸ್ವರಾಜ್ಯವೇ ಇವರ ಮೊದಲ ಗುರಿಯಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ, ಆ ಚಳವಳಿಯನ್ನು ಒಳಗಿನಿಂದಲೇ ಸಮಾಜವಾದೀಕರಣಗೊಳಿಸಲು ಸಮಾಜವಾದಿಗಳಿಗೆ ಇವರು ಕರೆ ನೀಡಿದ್ದರು. ಭಾರತದಲ್ಲೂ ಸಮಾಜವಾದಿ ಕ್ರಾಂತಿ ಫಲಿಸುವುದೆಂಬ ನಂಬಿಕೆ ಇವರಿಗೆ ಇತ್ತು. ಕ್ರಾಂತಿಯ ಸಾಧನವಾಗಿ ಸಿಂಡಿಕಲಿಸ್ಟರ ಸಾರ್ವತ್ರಿಕ ಮುಷ್ಕರ ತಂತ್ರದಲ್ಲೂ ಇವರಿಗೆ ಮೆಚ್ಚುಗೆಯಿತ್ತು. ಎರಡನೆಯ ಮಹಾಯುದ್ಧದ ಅನಂತರ ಅನೇಕ ಕಡೆ ಸಮಾಜವಾದಿ ಕ್ರಾಂತಿಯಾಗುವುದೆಂದು ಇವರು ಭವಿಷ್ಯ ನುಡಿದಿದ್ದರು. ಚೀನ, ಕ್ಯೂಬಾ ಮತ್ತು ಯೂಗೊಸ್ಲಾವಿಯಗಳಲ್ಲಿ ಮಾತ್ರ ಇದು ನಿಜವೆನ್ನಿಸಿತು.

	ನರೇಂದ್ರ ದೇವರು 1956ರ ಫೆಬ್ರವರಿ 19ರಂದು ಈರೋಡಿನಲ್ಲಿ ತೀರಿಕೊಂಡರು.	
	(ಎಂ.ಯು.ಎಂ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ